1934- ನಮ್ಮೆದುರಿನ ಸುಗಮ ಸಂಗೀತ ಪ್ರಕಾರದ ಮೊದಲ ಪರಂಪರೆಯವರು. ಕಳೆದ ಐದು ದಶಕಗಳಿಂದ ಹಾಡುತ್ತಾ ಬಂದಿರುವ ಅಪೂರ್ವ ಗಾಯಕಿ. ಸಾಧನೆ ಬೋಧನೆಗಳೆರಡರಲ್ಲೂ ದೊಡ್ಡ ಹೆಸರು ಮಾಡಿದವರು. ಲೀಲಾವತಿಯವರು ಹುಟ್ಟಿದ್ದು ಬೆಂಗಳೂರಿನಲ್ಲಿ 1934ರ ಫೆಬ್ರವರಿ 4 ರಂದು ತಾಯಿ ಜಯಲಕ್ಷಮ್ಮ, ತಂದೆ ಹಾಸನದ ರಾಮಣ್ಣ. ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಪ್ರಸಿದ್ಧ ರಾಗವಾದ ಅಠಾಣ ರಾಗದ ಅಸಾಧಾರಣ ಗಾಯನದಿಂದ ಬಾಪು ರಾಮಣ್ಣನವರಿಗೆ `ಅಠಾಣ ರಾಮಣ್ಣ' ಎಂದೇ ಜನ ಕರೆಯುವುದು ವಾಡಿಕೆಯಾಗಿತ್ತು. ಲೀಲಾವತಿಯವರ ತಂದೆ-ತಾಯಿ ಇಬ್ಬರ ಮನೆತನದಲ್ಲೂ ಸಂಗೀತ ಸಾಹಿತ್ಯದ ವಾತಾವರಣ ಢಾಳಾಗಿಯೇ ಇದ್ದಿದ್ದರಿಂದ ಬಾಲ್ಯದಿಂದಲೇ ಸಂಗೀತ ಅಂತರ್ಗತವಾಗಲು ಪ್ರಾರಂಭಿಸಿತು. ರಾಮಣ್ಣನವರ ತಾಯಿ ಮರಿಯಮ್ಮ ಹಾಡಿನ ಮರಿಯಮ್ಮ ಎಂದೇ ಪ್ರಖ್ಯಾತರಾಗಿದ್ದರು. ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, ಸಂಪ್ರದಾಯ ಹಾಡುಗಳು, ದೇವರನಾಮ, ಹಬ್ಬದ ಹಾಡುಗಳ ಪರಂಪರೆ ಮರಿಯಮ್ಮನವರಿಗಿತ್ತು. ಲೀಲಾವತಿಯವರ ತಾಯಿ ಜಯಲಕ್ಷ್ಮಮ್ಮನವರ ತಾತ, `ಹರಿಕಥೆ ರಾಮಣ್ಣ’ ಎಂದೇ ಪ್ರಸಿದ್ಧರಾಗಿದ್ದರು. 

	ಅಠಾಣ ರಾಮಣ್ಣನವರು ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರ ಶಿಷ್ಯರಾಗಿದ್ದರು. ಶ್ರೀಯವರ ಇಂಗ್ಲಿಷ್ ಗೀತೆಗಳಿಗೆ ರಾಗಸಂಯೋಜನೆ ಮಾಡಿ ಹಾಡುತ್ತಿದ್ದರು. ರನ್ನ, ಪಂಪ, ಜನ್ನ ಹರಿಹರರ ಕಾವ್ಯಗಳನ್ನು ವಾಚನ ಮಾಡುತ್ತಿದ್ದರು. ಜಯಲಕ್ಷ್ಮಮ್ಮನವರು ವೃತ್ತಿರಂಗಭೂಮಿಯ ಪ್ರಸಿದ್ಧ ನಟರಾಗಿದ್ದ ಕೊಟ್ಟೂರಪ್ಪನವರ ಶಿಷ್ಯೆ. ಶಾಸ್ತ್ರೀಯ ಸಂಗೀತದೊಂದಿಗೆ ಹಿಂದಿ ಹಾಡುಗಳನ್ನ ಕಲಿತಿದ್ದರು. ಸ್ತೋತ್ರಗಳು, ಸಂಪ್ರದಾಯ ಹಾಡುಗಳು, ಕಥನ ಕವನಗಳು ಅವರ ದೈನಂದಿನ ರೂಢಿಯಾಗಿತ್ತು. ಲೀಲಾವತಿ, ತಾಯಿ ಮಡಿಲಲ್ಲೇ ಇವೆಲ್ಲದರ ಗಾಢ ಪರಿಮಳವನ್ನು ಆಸ್ವಾದಿಸಿ ಅರಳುತ್ತ ಹೋದರು. ಎಳವೆಯಲ್ಲೇ ಚಿಗುರಿದ ಆಸೆಗೆ ಮನೆಯ ವಾತಾವರಣ ನೀರೆರೆದು ಪೋಷಿಸಲು ತೊಡಗಿತು. ದೊಡ್ಡವರು ಮನೆಯಲ್ಲಿ ಪ್ರತಿದಿನ ಮಕ್ಕಳನ್ನು ದೇವರ ಮುಂದೆ ಕೂರಿಸಿ ಭಜನೆ, ಸ್ತೋತ್ರಗಳನ್ನು ಕಲಿಸುವುದು ಪರಿಪಾಠವಾಗಿತ್ತು. ಮನೆಯಲ್ಲಿ ಹಿರಿಯರಿಂದ, ಕಿರಿಯರವರೆಗೆ ಎಲ್ಲರೂ ಹಾಡುತ್ತಿದ್ದರು. ಗ್ರಾಮೋಫೋನ್ ಇದ್ದಿದ್ದರಿಂದ ಸೈಗಾಲ್, ಪಂಕಜ್ ಮಲ್ಲಿಕ್, ಜೂತಿಕಾರಾಯ್ ಮುಂತಾದವರು ಹಾಡಿದ ಸಿನಿಮ ಹಾಡುಗಳು, ಲೀಲಾವತಿಯವರಿಗೆ ಬಾಲ್ಯದಲ್ಲೇ ಕಂಠಪಾಠವಾಗಿತ್ತು. ಅಂದು ದೊಡ್ಡ ಹೆಸರಾಗಿದ್ದ ಹಿಂದುಸ್ತಾನಿ ಗಾಯಕಿಯರಾದ ಗೋಹರ್‍ಜಾನ್, ಕೇಸರ್‍ಬಾಯಿ ಅವರುಗಳು ಹಾಡಿದ ಧ್ವನಿ ತಟ್ಟೆಗಳು ಬಾಲಕಿ ಲೀಲಾವತಿ ಕಿವಿಯ ಮೇಲೆ ಬಿದ್ದು ಶಾಸ್ತ್ರೀಯ ಸಂಗೀತಕ್ಕೆ ಹದವಾದ ಭೂಮಿಕೆಯನ್ನು ಸಿದ್ಧಪಡಿಸಿದ್ದವು.

	ಲೀಲಾವತಿ ಅವರಿಗೆ ರಂಗ ಸಂಗೀತದ ಗುಂಗು ಹತ್ತಿದ್ದು, ಸಿಲ್ಕ್ ಫಿಟೇಚರ್‍ನಲ್ಲಿ ಮ್ಯಾನೇಜರಾಗಿದ್ದ ರಾಮಣ್ಣನವರಿಗೆ ಟಿ. ನರಸೀಪುರಕ್ಕೆ ವರ್ಗವಾದಾಗ. ಗುಬ್ಬಿವೀರಣ್ಣನವರ ಕಂಪನಿ, ಶೇಷಕಮಲ ಕಲಾ ಮಂಡಳಿ “ಮಂಜುನಾಥ ಥಿಯೇಟರ್ಸ್”, ಕರ್ನಾಟಕ ನಾಟಕ ಕಂಪನಿ ಇವುಗಳೆಲ್ಲ ಟಿ. ನರಸೀಪುರದಲ್ಲಿ ನಾಟಕ ಪ್ರದರ್ಶನ ಮಾಡುತ್ತಿದ್ದಾಗ ರಾಮಣ್ಣನವರಿಗೆ ಎಲ್ಲಾ ನಾಟಕ ಪ್ರದರ್ಶನಕ್ಕೂ ಆಹ್ವಾನವಿರುತ್ತಿತ್ತು. ಹನ್ನೆರಡು ವರುಷದ ಬಾಲೆ ಲೀಲಾವತಿ ತಾಯಿತಂದೆಯರೊಡನೆ ಪ್ರತಿಯೊಂದು ನಾಟಕವನ್ನು ತಪ್ಪದೆ ನೋಡುತ್ತಿದ್ದರು. ನಾಟಕದ ಹಾಡುಗಳನ್ನು ಒಮ್ಮೆ ಕೇಳಿದಾಗಲೇ ಕಂಠಪಾಠ ಮಾಡಿಕೊಳ್ಳುತ್ತಿದ್ದಳು. ಹಾಡುಗಳನ್ನು ಕಲಿಯಲೆಂದು ಪುನಃ ಪುನಃ ನಾಟಕ ನೋಡುತ್ತಿದ್ದರು. ಹಾಡುಗಳನ್ನು ಕಲಿಯಲೆಂದೆ ನಾಟಕ ನೋಡುವುದು ಮತ್ತು ನಾಟಕ ನೋಡಲೆಂದೇ ಹಾಡುಗಳನ್ನು ಕಲಿಯುವುದು ಹನ್ನೆರಡರ ಕಿಶೋರಿಯ ಕಾಯಕವಾಯಿತು.
 
	ಶಾಸ್ತ್ರೀಯ ಸಂಗೀತದಲ್ಲಿ ಪ್ರಾಥಮಿಕ ಶಿಕ್ಷಣ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ರಾಮಸ್ವಾಮಿ ಅವರಲ್ಲಿ. ಅನಂತರ ವಿದ್ವಾನ್ ಎನ್. ಚೆನ್ನಕೇಶವಯ್ಯನವರ ಬಳಿ ಸಂಗೀತ ಪಾಠ ಮುಂದುವರೆಯಿತು. ಗುರು ಚೆನ್ನಕೇಶವಯ್ಯನವರು ತಾವು ಕಲಿಸಿದುದೇ ಅಲ್ಲದೆ ತಮ್ಮ ಸ್ನೇಹಿತರಾದ ನಾಗಪುರದ ಸುಬ್ಬರಾಯರಿಂದಲೂ ಲೀಲಾವತಿಗೆ ಹಿಂದಿ ವರ್ಣ, ಕೀರ್ತನೆ, ಭಜನೆಗಳ ಪಾಠ ಮಾಡಿಸಿದರು. ಶ್ರೀಯವರು ರಚಿಸಿದ ಅನಾಥೆ ಇವಳಿನ್ನೊಬ್ಬಳೀ ಜನ್ಮ ಎಂಬ ಕವನ ಹಾಡಿ ಬಹುಮಾನ ಗೆದ್ದ ಲೀಲಾವತಿ, ಆಕಾಶವಾಣಿಯಲ್ಲಿ ಮೊದಲ ಬಾರಿಗೆ ಹಾಡಿ ತಾರೆಯಾಗಿ ಮಿಂಚಿದರು.	

ಆಕಾಶವಾಣಿಯ ಸಂಗೀತ ನಿರ್ದೇಶಕರಾದ ಕೃಷ್ಣಮಾಚಾರ್ಯರ ಬಳಿ ಲೀಲಾವತಿ ಸುಗಮ ಸಂಗೀತವನ್ನು ಕಲಿಯಲು ಪ್ರಾರಂಭಿಸಿದ ಎಂಟೇ ದಿನಗಳಲ್ಲಿ ಆಕಾಶವಾಣಿಯಿಂದ ಹಾಡಲು ಕರೆ ಬಂತು. ಗೌರಿ ತವರಿಗೆ ಹೋಗಿ ಬಂದ ಎನ್ನುವ ಜನಪದಗೀತೆ 1950ರ ಆಗಸ್ಟ್ 14ರಂದು ಆಕಾಶವಾಣಿಯ ಕೃಷಿರಂಗ ಕಾರ್ಯಕ್ರಮದ ಮೂಲಕ ಬಿತ್ತರಗೊಳ್ಳುವುದರೊಂದಿಗೆ ಹದಿನಾರರ ಹರೆಯದ ಲೀಲಾವತಿ ನಾದ ಯಾತ್ರೆ ಆರಂಭವಾಯಿತು. ವಿವಿಧ ಭಾಷೆಯ ಹಾಡಿಗೂ ದನಿಗೂಡಿಸಿದರು. 1951ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ಮೊಟ್ಟಮೊದಲು ಪ್ರಸಾರವಾದ ಹಿಂದಿ ಭಾವಗೀತೆಗಳನ್ನು ಹಾಡಿದ್ದು ಲೀಲಾವತಿಯವರಿಗೆ ಮತ್ತೊಂದು ಸಾಧನೆ. ಅಬ್ದುಲ್ ಗಫೂರ್, ಮೀರಾಬಲ್ಸೆ, ಮುಂತಾದ ಪ್ರಸಿದ್ಧಿ ಹಿಂದಿ ಗಾಯಕ ಗಾಯಕಿಯರೊಂದಿಗೆ ಹಿಂದಿಗೀತೆಗಳನ್ನು ಹೆಚ್ಚು ಹೆಚ್ಚು ಹಾಡಿದ್ದ ಲೀಲಾವತಿ, ಕನ್ನಡ ಭಾವಗೀತೆಗಳನ್ನು ಹಾಡುವಾಗ ಬೇರೆ ಬೇರೆಯಾಗಿ ಕೇಳುತ್ತಿತ್ತು. ಕನ್ನಡ ಭಾವಗೀತೆಗಳನ್ನು ಹಾಡುವ ಲೀಲಾವತಿಯೇ ಬೇರೆ, ಹಿಂದಿ ಗೀತೆಗಳನ್ನು ಹಾಡುವ ಲೀಲಾವತಿಯೇ ಬೇರೆ ಎಂಬ ಭ್ರಮೆ ಬಹಳ ಕಾಲ ಕಾಡಿತು.

	ಲೀಲಾವತಿ ಮಹಾರಾಜ ಕಾಲೇಜಿನಲ್ಲಿ ಬಿ.ಎ. ತರಗತಿಯಲ್ಲಿದ್ದಾಗಲೇ ಪ್ರಖ್ಯಾತ ಗಾಯಕಿಯಾಗಿದ್ದರು. ಕಾಲೇಜಿನ ಎಲ್ಲ ಮಿತ್ರರು ಕಾರ್ಯಕ್ರಮಗಳಲ್ಲಿ, ಲೀಲಾವತಿಯವರ ಗಾಯನವಿದ್ದೇ ಇರುತ್ತಿತ್ತು. `ಮಹಾರಾಜ ಕಾಲೇಜಿನ ಲತಾಮಂಗೇಶ್ಕರ್’ ಎಂದೇ ಪ್ರಸಿದ್ಧರಾಗಿದ್ದರು. 

	1953-54ರಿಂದ ಆಕಾಶವಾಣಿಯಲ್ಲಿ ಧ್ವನಿ ಪರೀಕ್ಷೆ ಮಾಡುವ ಪರಿಪಾಟ ಆರಂಭವಾಯಿತು. ಲೀಲಾವತಿ ಮತ್ತು ಪಿ.ಕಾಳಿಂಗರಾವ್ ಅವರಿಗೆ ಈ ಧ್ವನಿ ಪರೀಕ್ಷೆಯಲ್ಲಿ ವಿನಾಯಿತಿ ಸಿಕ್ಕಿತ್ತು. ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಎರಡೂ ಪ್ರಕಾರಗಳಲ್ಲೂ ಕಾರ್ಯಕ್ರಮ ನೀಡುತ್ತಿದ್ದ ಲೀಲಾವತಿ ಸುಗಮಸಂಗೀತಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಎ.ವಿ. ಕೃಷ್ಣಮಾಚಾರ್ಯರು ಪದ್ಮಚರಣರಾಗಿ ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕುತ್ತಾ, ತಮ್ಮ ಶಿಷ್ಯೆಯನ್ನು ತಮ್ಮೆತ್ತರಕ್ಕೆ ಬೆಳೆಸಿದರು. ಗುರು ಪದ್ಮಚರಣ್‍ರ ಬಳಿ ಸುಮಾರು 23 ವರ್ಷಗಳ ಕಾಲ ನಿರಂತರವಾಗಿ ಮಾರ್ಗದರ್ಶನ ಪಡೆದರು. ಭಾವಗೀತಾ ಗಾಯನದಿಂದ ಮೆಚ್ಚುಗೆ, ಸಂಭ್ರಮ, ಆನಂದ, ಹಣ, ಕೀರ್ತಿ ಎಲ್ಲವೂ ಹರಿದು ಬಂದಿತು.

	ಸಾಧನೆಯಿಂದ ಬೋಧನೆಯತ್ತ ಮನಸ್ಸು ತುಡಿಯತೊಡಗಿತು. ಶಾಸ್ತ್ರೀಯ ಸಂಗೀತದಿಂದ ಬೋಧನೆ ಆರಂಭಿಸಿದ ಲೀಲಾವತಿ ಭಾವಗೀತೆಗಳವರೆಗೆ ಇದರ ಹರಹನ್ನು ಹರಡಿದರು. ತಾವೇ ರಾಗ ಸಂಯೋಜಿಸಿ ಮಕ್ಕಳಿಗೆ ಹಾಡಲು ಕಲಿಸಿದರು. ಭಾವಗೀತೆ, ವಚನ, ದೇವರನಾಮ, ಜನಪದಗೀತೆ ಎಲ್ಲವನ್ನು ಕಲಿಸುತ್ತ ಹೊರಟ ಲೀಲಾವತಿಯವರ ಶಿಷ್ಯರ ಸಂಖ್ಯೆ ಬೆಳೆಯತೊಡಗಿತು. ಲೀಲಾವತಿಯವರ ಕೋಗಿಲೆ ಕಂಠ ಮೆಚ್ಚಿ ಆರಾಧಿಸಿದ ಎಸ್.ಜಿ. ರಘುರಾಂ ಎಂಬ ಪ್ರಖ್ಯಾತ ಹಾಡುಗಾರರು, ಅವರ ಮೆಚ್ಚುಗೆ ಮದುವೆಯಲ್ಲಿ ಪರ್ಯವಸಾನವಾಯಿತು. 

	ಲೀಲಾವತಿ ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕರಾಗಿ ಕೆಲಸಕ್ಕೆ ಸೇರಿದ್ದು (1976) ಆಕೆಗೆ ಸಂಗೀತದ ಮೇಲಿದ್ದ ನಿಷ್ಠೆಯೇ ಕಾರಣವಾಯಿತು. ಸಂಗೀತ ಸಂಯೋಜನೆ ಕೆಲಸವನ್ನು ಪ್ರೀತಿಯಿಂದ ಅಪ್ಪಿಕೊಂಡರು. ಕೇವಲ ಭಾವಗೀತೆಗಳಿಗಷ್ಟೇ ಅಲ್ಲದೆ, ನಾಟಕ ಮತ್ತು ಅವುಗಳ ಸನ್ನಿವೇಶಕ್ಕೆ ಹೊಂದುವಂತಹ ಸಂಗೀತವನ್ನು ಸಂಯೋಜಿಸುವುದೂ ಒಂದು ಸವಾಲಾಯಿತು. ಸನ್ನಿವೇಶಗಳಿಗನುಗುಣವಾಗಿ ಸಾಂದರ್ಭಿಕ ಗೀತೆಗಳನ್ನು ರಚಿಸಿ ಸಂಗೀತ ಸಂಯೋಜಿಸುವುದು, ಸಂಗೀತ ರೂಪಕಗಳನ್ನು ಸಂಯೋಜಿಸುವುದು, ಲೀಲಾವತಿ ಸೃಜನಾತ್ಮಕವಾಗಿ ಬೆಳೆಯಲು ಬಹುಮಟ್ಟಿಗೆ ಸಹಾಯವಾದವು.

	ಮೈಸೂರು ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಕಥೆ ಹೇಳುವ ಕಾರ್ಯಕ್ರಮವನ್ನು ಯೋಜಿಸಿದವರು ಮಗುವಿನ ತಾಯಿಯು ಸಂತೃಪ್ತ ಗೃಹಿಣಿಯು ಆಗಿದ್ದ ಲೀಲಾವತಿ, ಮುದ್ದಿನ ಮಗ ಸುಕುಮಾರನಿಗೆ ಮಲಗುವ ಮುನ್ನ ಹೇಳಬೇಕಾಗುತ್ತಿದ್ದ ಕಥೆಗಳನ್ನೇ ಚಿಕ್ಕಮ್ಮನಾಗಿ ಆಕಾಶವಾಣಿಯಲ್ಲಿ ಹೇಳುತ್ತಿದ್ದ ರೀತಿ ಅತ್ಯಂತ ಆಕರ್ಷಕವಾಗಿತ್ತು. 

	ಕೋಲ್ಕತ್ತೆಯ ರಾಬಿನ್‍ರೇರವರಲ್ಲಿ ರವೀಂದ್ರ ಸಂಗೀತವನ್ನು ಕಲಿತ ಲೀಲಾವತಿಯವರು ಆಕಾಶವಾಣಿಯ ಕೋಲ್ಕತ್ತ, ಗುವಾಹಟಿ, ಪಾಟನಾ, ರಾಂಚಿ, ಚೆನ್ನೈ ಮುಂತಾದ ಕೇಂದ್ರಗಳಿಂದ ಮಾತೃಭಾಷೆಯಾದ ಕನ್ನಡವಲ್ಲದೆ ಬೆಂಗಾಲಿ, ಹಿಂದಿ, ತೆಲುಗು, ಅಸ್ಸಾಮಿ, ಗುಜರಾತಿ, ಮರಾಠಿ, ಮಲಯಾಳ ಭಾಷೆಗಳಲ್ಲಿ ನೂರಾರು ಹಾಡನ್ನು ಹಾಡಿದ ಹಿರಿಮೆ ಇವರದು.

	ಸಂಗೀತದ ಜೊತೆಗೆ ಲೀಲಾವತಿ ಕಥೆ, ಕವನ, ಹಾಸ್ಯ ಲೇಖನ, ವೈಜ್ಞಾನಿಕ ಲೇಖನ, ಚುಟುಕ, ಮಕ್ಕಳ ಸಾಹಿತ್ಯ, ನಾಟಕ, ಕಾವ್ಯ ಲೇಖನ ಸಂಕಲನ ಎಲ್ಲಾ ಪ್ರಕಾರಗಳಲ್ಲೂ ಪರಿಶ್ರಮ ಗಳಿಸಿದರು. ನಾಟಕ ಕಾವ್ಯ, ಲೇಖನ ಸಂಕಲನಕ್ಕೆ ಪ್ರಶಸ್ತಿಯೂ ಬಂದಿದೆ. 

	1995ರಲ್ಲಿ ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದ ವರುಷದ ಕಲಾವಿದೆ ಎಂದು ಸನ್ಮಾನಿತರಾದರು. ರಚಿಸಿದ ಸಾಹಿತ್ಯ ಕೃತಿಗಳಿಗೂ ಪ್ರಶಸ್ತಿಗಳು ಬಂದಿವೆ. 

	ಲೀಲಾವತಿಯವರ ಸಂಗೀತ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಸರಕಾರ ಅವರನ್ನು ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಿಸಿ ಗೌರವಿಸಿತು.	
ಲೀಲಾವತಿ ದಂಪತಿಗಳು ಅಮೆರಿಕಕ್ಕೆ ತೆರಳಿದ (1983) ಪ್ರಥಮ ಸುಗಮ ಸಂಗೀತ ಕಲಾವಿದರೆಂಬ ಹೆಮ್ಮೆಗೂ ಪಾತ್ರರಾದರು. 1985ರಲ್ಲಿ ಸ್ಥಾಪಿಸಿದ ಇವರ ಸುಗಮ ಸಂಗೀತ ಅಕಾಡೆಮಿ ಹಲವಾರು ಸುಗಮ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ.

	ಕರ್ನಾಟಕ ಕಲಾತಿಲಕ, (1982) ರಾಜ್ಯೋತ್ಸವ ಪ್ರಶಸ್ತಿ, (1992)ರಲ್ಲಿ ಸುಗಮಸಂಗೀತಕ್ಕೆ ನೀಡುವ ಅತ್ಯುನ್ನತ ಶಿಶುನಾಳ ಷರೀಫ್ ಪ್ರಶಸ್ತಿ (1998) ಯಲ್ಲದೆ ಸಂದ ಸಾರ್ವಜನಿಕ ಪ್ರಶಸ್ತಿಗಳೂ ಅಸಂಖ್ಯ.

	ಲೀಲಾವತಿಯವರು ಗೀತಗಾಯನ ಈ ಮೂರು ಕ್ಷೇತ್ರಗಳಲ್ಲಿಯೂ ಲೀಲಾಜಾಲವಾಗಿ ಕೈಯಾಡಿಸಿ ತಮ್ಮ ಛಾಪು ಮೂಡಿಸಿದ್ದಾರೆ. ಸಂಗೀತದಲ್ಲಿ ಬದುಕನ್ನು, ಬದುಕಿನಲ್ಲಿ ಸಂಗೀತವನ್ನೂ ತುಂಬಿಕೊಂಡ ಅಪರೂಪದ ಗಾಯಕಿ, ಬೋಧಕಿ, ಸಂಯೋಜಕಿ, ಲೇಖಕಿ. 
									
(ಜಯಶ್ರೀ ಅರವಿಂದ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ